Home » ಜೌಗು ಪ್ರದೇಶಗಳ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಹೇಗೆ?

ಜೌಗು ಪ್ರದೇಶಗಳ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಹೇಗೆ?

ಪ್ರತಿ ವರ್ಷ, ಜೌಗು ಭೂಮಿಯ ಸಂರಕ್ಷಣೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಜನರಲ್ಲಿ ಎತ್ತಿ ತೋರಿಸಲು ನಿರ್ದಿಷ್ಟ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ. ನಮ್ಮೆಲ್ಲರ ಮುಂದಿನ ಭವಿಷ್ಯಕ್ಕಾಗಿ ಪರಿಸರ ಆರೋಗ್ಯವನ್ನು ಕಾಪಾಡುವಲ್ಲಿ, ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ಮತ್ತು ಭವಿಷ್ಯದ ಪೀಳಿಗೆಗೆ ಸುಸ್ಥಿರ ಜೀವನೋಪಾಯವನ್ನು ಬೆಂಬಲಿಸುವಲ್ಲಿ ಚೌಗು ಪ್ರದೇಶಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಅಗತ್ಯತೆ ಬಂದೊದಗಿದೆ. ಅಂದರೆ, ಜೌಗು ಪ್ರದೇಶಗಳ ಸಂರಕ್ಷಣೆಯಲ್ಲಿ ನಮ್ಮ ಸ್ವಾರ್ಥವೂ ಇದೆ.

ಜೌಗು ಪ್ರದೇಶಗಳು ಏಕೆ ಮುಖ್ಯ ?

ಜೌಗು ಪ್ರದೇಶಗಳು ಏಕೆ ಪ್ರಮುಖವಾಗಿವೆ ಎಂಬುದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ ಜೀವವೈವಿಧ್ಯತೆಯ ಪ್ರಮುಖ ತಾಣಗಳು ಜೌಗು ಪ್ರದೇಶಗಳು ವಿವಿಧ ರೀತಿಯ ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳಿಗೆ ಆಸರೆಯಾಗಿವೆ. ಪಕ್ಷಿಗಳು, ಜಲಚರ ಜೀವಿಗಳು ಮತ್ತು ಕೀಟಗಳು ಸೇರಿದಂತೆ ಅನೇಕ ಪ್ರಭೇದಗಳ ಸಂತಾನೋತ್ಪತ್ತಿ, ಆಹಾರ ಮತ್ತು ಆಶ್ರಯಕ್ಕಾಗಿ ಜೌಗು ಪ್ರದೇಶಗಳನ್ನು ಅವಲಂಬಿಸಿವೆ. (ಉದಾಹರಣೆಗೆ ಅಮೆಜಾನ್ ನದಿ ಜಲಾನಯನ ಪ್ರದೇಶ, ಸುಂದರಬನ್ಸ್ ಮ್ಯಾಂಗೋವ್ ಕಾಡುಗಳು, ಫ್ಲೋರಿಡಾದ ಕರಾವಳಿ ಜೌಗು ಪ್ರದೇಶಗಳು ಇತ್ಯಾದಿ).

ನೀರಿನ ಶುದ್ಧೀಕರಣ : ಜೌಗು ಪ್ರದೇಶಗಳಿಗೆ ಬೇರೆ ಕಡೆಯಿಂದ ಹರಿದು ಬಂದ ನೀರಿನಲ್ಲಿರುವ ಮಾಲಿನ್ಯಕಾರಕಗಳು, ಹೂಳು ಮತ್ತು ಹೆಚ್ಚುವರಿ ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ನೈಸರ್ಗಿಕ ಶೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ.

ಪ್ರವಾಹ ನಿಯಂತ್ರಣ ಮತ್ತು ನೀರಿನ ಸಂಗ್ರಹ ಭಾರೀ ಮಳೆ ಅಥವಾ ಹಿಮ ಕರಗುವ ಸಮಯದಲ್ಲಿ, ಜೌಗು ಪ್ರದೇಶಗಳು ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತವೆ. ಇದರಿಂದ ಹತ್ತಿರದ ಕೃಷಿ ಭೂಮಿ ಇಲ್ಲವೇ ಜನರು ವಾಸಿಸುವ ಪ್ರದೇಶಗಳಲ್ಲಿ ಆಗಬಹುದಾದ ಪ್ರವಾಹದ ಅಪಾಯ ಕಡಿಮೆಯಾಗುತ್ತವೆ. ಅವು ನೈಸರ್ಗಿಕ ಸ್ಪಂಜುಗಳಾಗಿ ಕಾರ್ಯನಿರ್ವಹಿಸುವುದರಿಂದ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಿ ಕಾಲಾನಂತರದಲ್ಲಿ ನಿಧಾನವಾಗಿ ಬಿಡುಗಡೆ ಮಾಡುತ್ತವೆ.

ಕರಾವಳಿ ರಕ್ಷಣೆ : ಮ್ಯಾಂಗ್ರೂವ ಪ್ರದೇಶಗಳಂತಹ ಕರಾವಳಿಯಲ್ಲಿಯ ಜೌಗು ಪ್ರದೇಶಗಳು ಚಂಡಮಾರುತದ ಉಲ್ಬಣಗಳು, ಹೆಚ್ಚಿನ ಉಬ್ಬರವಿಳಿತಗಳ ಅಲೆಗಳು ಮತ್ತು ಕಡಲ ತೀರದ ಸವೆತದ ವಿರುದ್ಧ ಬಫರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ಚಂಡಮಾರುತಗಳ ಪ್ರಭಾವವನ್ನು ಸಹಿಸಿಕೊಳ್ಳುವುದರಿಂದ, ಕರಾವಳಿ ಸಮುದಾಯ ಮತ್ತು ಮೂಲಸೌಕರ್ಯಗಳಿಗೆ ಹಾನಿಯನ್ನು ಕಡಿಮೆ ಮಾಡುತ್ತವೆ.

ಜೀವನೋಪಾಯಗಳು ಮತ್ತು ಆರ್ಥಿಕ ಪ್ರಯೋಜನಗಳು ಪ್ರದೇಶಗಳು ಸ್ಥಳೀಯವಾಗಿ ಮೀನುಗಾರಿಕೆ, ಕೃಷಿ, ಪ್ರವಾಸೋದ್ಯಮ ಮತ್ತು ಮನರಂಜನೆಯಂತಹ ಕೈಗಾರಿಕೆಗಳಿಗೆ ಆಸರೆಯಾಗಿವೆ. ಅನೇಕ ಸಮುದಾಯಗಳು ವಾಣಿಜ್ಯ ಮತ್ತು ಜೀವನಾಧಾರಕ್ಕಾಗಿ ಮೀನುಗಾರಿಕೆ ಮಾಡಲು ಜೌಗು ಪ್ರದೇಶಗಳನ್ನು ಅವಲಂಬಿಸಿವೆ. ಪರಿಸರ ಪ್ರವಾಸೋದ್ಯಮಕ್ಕೆ ಜೌಗು ಪ್ರದೇಶಗಳೂ ಸಹ ಮುಖ್ಯವಾಗಿದೆ. (ಉದಾಹರಣೆಗೆ ಒಡಿಶಾದ ಚಿಲಿಕಾ ಸರೋವರ, ಮಣಿಪುರದ ಲೋಕ್ಷಾಕ್ ಸರೋವರ, ಮಹಾರಾಷ್ಟ್ರದ ನಂದಾ ಸರೋವರ ಇತ್ಯಾದಿ)

ಹವಾಮಾನ ನಿಯಂತ್ರಣ:
ಪ್ರದೇಶಗಳು ಅವುಗಳ ಸುತ್ತಮುತ್ತಲಿನ ತಾಪಮಾನ ಮತ್ತು ತೇವಾಂಶವನ್ನು ನಿಯಂತ್ರಿಸುವ ಮೂಲಕ ಸ್ಥಳೀಯ ಮತ್ತು ಪ್ರಾದೇಶಿಕ ಹವಾಮಾನದ ಮೇಲೆ ಪೂರಕ ಪ್ರಭಾವ ಬೀರುತ್ತವೆ. ಆರ್ದಭೂಮಿಗಳು ತಮ್ಮ ಇಂಗಾಲದ ಶೇಖರಣಾ ಸಾಮರ್ಥ್ಯದ ಮೂಲಕ ಜಾಗತಿಕ ಹವಾಮಾನ ನಿಯಂತ್ರಣಕ್ಕೆ ಕೊಡುಗೆ ನೀಡುತ್ತವೆ.

ಹಾಗಾದರೆ, ಜೌಗು ಪ್ರದೇಶಗಳು ಹೇಗೆ ರೂಪುಗೊಳ್ಳುತ್ತವೆಂದು ಗೊತ್ತೇ ?

ಭೌತಿಕ, ಜೈವಿಕ ಮತ್ತು ಹವಾಮಾನ ಪ್ರಕ್ರಿಯೆಗಳ ಸಂಯೋಜನೆಯ ಮೂಲಕ ಜೌಗು ಪ್ರದೇಶಗಳು ರೂಪುಗೊಳ್ಳುತ್ತವೆ. ಅವುಗಳ ರಚನೆಯು ವಿಶಿಷ್ಟವಾಗಿ ಕಾಲಾನಂತರದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರಿನ ಶೇಖರಣೆಗೆ ಒಳಪಟ್ಟು, ಜಲಾವೃತ ಮಣ್ಣು, ಜಲಸಸ್ಯಗಳು ಮತ್ತು ವಿಶೇಷ ಜಾತಿಯ ಗುಣಲಕ್ಷಣಗಳನ್ನು ಹೊಂದಿರುವ ವಿಶಿಷ್ಟ ಪರಿಸರ ವ್ಯವಸ್ಥೆಗಳ ಅಭಿವೃದ್ಧಿಗೆ ಕಾರಣವಾಗುತ್ತದೆ. ಚೌಗು ಪ್ರದೇಶಗಳ ರಚನೆಯಲ್ಲಿ ಒಳಗೊಂಡಿರುವ ಪ್ರಾಥಮಿಕ ಅಂಶಗಳೆಂದರೆ;
ನೀರಿನ ಶೇಖರಣೆ ಜೌಗು ಪ್ರದೇಶಗಳು ಪ್ರಾಥಮಿಕವಾಗಿ ನೀರು ಸಂಗ್ರಹಗೊಳ್ಳುವ ಅಥವಾ ದೀರ್ಘಾವಧಿಯವರೆಗೆ ನಿಶ್ಚಲವಾಗಿರುವ ಪ್ರದೇಶಗಳಲ್ಲಿ ರಚನೆಯಾಗುತ್ತವೆ. ಇದು ವಿವಿಧ ಪ್ರಕ್ರಿಯೆಗಳ ಮೂಲಕವೂ ಸಂಭವಿಸಬಹುದು. ಮೊದಲನೆಯದಾಗಿ, ನದಿಗಳು, ಸರೋವರಗಳು ಅಥವಾ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗುತ್ತದೆ ಮತ್ತು ಉಳಿದಿರುವ ಜಲಾನಯನ ಪ್ರದೇಶಗಳಲ್ಲಿ ಮೇಲೆ ನೀರಿನ ಒಳಹರಿವಿನಿಂದ ಚೌಗು ಪ್ರದೇಶಗಳು ರೂಪುಗೊಳ್ಳಬಹುದು. ಇದು ವರ್ಷದ ಕೆಲ ಭಾಗ ಅಥವಾ ವರ್ಷವಿಡೀ ನಿಂತ ನೀರನ್ನು ಸೃಷ್ಟಿಸುತ್ತದೆ. ಎರಡನೆಯದಾಗಿ, ಕೆಲವು ಸಂದರ್ಭಗಳಲ್ಲಿ ಅಂತರ್ಜಲ ವಿಸರ್ಜನೆಯಿಂದ ಅಂತರ್ಜಲವು ಮೇಲ್ಮಗೆ ಏರುವುದರಿಂದ ಚೌಗು ಪ್ರದೇಶಗಳು ರೂಪುಗೊಳ್ಳುತ್ತವೆ.

ಹವಾಮಾನ ಮತ್ತು ಮಳೆ ‌ಜೌಗು ಭೂಮಿಗಳು ಸಾಮಾನ್ಯವಾಗಿ ಪ್ರಾದೇಶಿಕ ಹವಾಮಾನ ಪರಿಸ್ಥಿತಿಗಳಿಂದ, ವಿಶೇಷವಾಗಿ ಮಳೆಯ ಮಾದರಿಗಳಿಂದ ರೂಪುಗೊಳ್ಳುತ್ತವೆ. ಸ್ಥಿರವಾಗಿ ಒಂದೇ ಸಮನೆ ಹೆಚ್ಚು ಮಳೆಯಾಗುವ ಅಥವಾ ಪ್ರವಾಹವಿರುವ ಪ್ರದೇಶಗಳು ಸಾಮಾನ್ಯವಾಗಿ ಜೌಗು ಪ್ರದೇಶಗಳನ್ನು ರೂಪಿಸುವುದು ಹೆಚ್ಚು. (ಉದಾಹರಣೆಗೆ ಬ್ರೆಜಿಲ್‌ನ ಅಮೆಜಾನ್ ಮಳೆಕಾಡಿನ ಜೌಗು ಪ್ರದೇಶಗಳು ಹಾಗು ಮಧ್ಯ ಆಫ್ರಿಕಾದ ಕಾಂಗೋ ಬೇಸಿನ್ ಚೌಗು ಪ್ರದೇಶಗಳು)

ಸ್ಥಳಾಕೃತಿ ಮತ್ತು ಭೂದೃಶ್ಯದ ವೈಶಿಷ್ಟ್ಯಗಳು
ಜೌಗು ಪ್ರದೇಶಗಳ ರಚನೆಯಲ್ಲಿ ಭೂಮಿಯ ಭೌತಿಕ ಲಕ್ಷಣಗಳು ನಿರ್ಣಾಯಕವಾಗಿವೆ. ಚೌಗು ಪ್ರದೇಶಗಳು ಸಾಮಾನ್ಯವಾಗಿ ನೈಸರ್ಗಿಕವಾಗಿರುವ ತಗ್ಗು ಪ್ರದೇಶಗಳಲ್ಲಿ ರೂಪುಗೊಳ್ಳುತ್ತವೆ. ಉದಾಹರಣೆಗೆ, ಕಣಿವೆಗಳು, ಪ್ರವಾಹ ಪ್ರದೇಶಗಳು ಅಥವಾ ಕರಾವಳಿ ಪ್ರದೇಶಗಳಲ್ಲಿ ಸುಲಭವಾಗಿ ನೀರು ಸಂಗ್ರಹವಾಗಿ ಬಹಳ ದಿನ ಉಳಿಯುತ್ತದೆ. ಕಡಲ ಪ್ರದೇಶಗಳಲ್ಲಿನ ಉಬ್ಬರವಿಳಿತಗಳು, ಅಲೆಗಳು ಮತ್ತು ಹೂಳು ನಿಕ್ಷೇಪಗಳ ಪರಸ್ಪರ ಕ್ರಿಯೆಯಿಂದ ಕರಾವಳಿಯಲ್ಲಿ ಜೌಗು ಪ್ರದೇಶಗಳು ರೂಪುಗೊಳ್ಳುತ್ತವೆ.

ಜೌಗು ಪ್ರದೇಶಗಳಲ್ಲೂ ವರ್ಗಿಕರಣವಿದೆ!

ಜೌಗು ಪ್ರದೇಶಗಳನ್ನು ನೀರಿನ ಲವಣಾಂಶ, ಸಸ್ಯಗಳ ಜೀವನ ಚಕ್ರ ಮತ್ತು ಸ್ಥಳಗಳ ಗುಣಲಕ್ಷಣಗಳ ಆಧಾರದ ಮೇಲೆ ವಿವಿಧ ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ.

1)ಒಳನಾಡಿನ ಜೌಗು ಪ್ರದೇಶಗಳು ಅಂದರೆ ಸರೋವರಗಳು, ನದಿಗಳು, ಮಾರ್ಷಸ್ (ಮೃದುವಾದ ಸಸ್ಯ ಅಥವಾ ಹುಲ್ಲುಗಾವಲು ಜಲಾವೃತಗೊಂಡಿರುವ ಪ್ರದೇಶ), ಪೀಟ್‌ಲ್ಯಾಂಡ್ (ಭಾಗಶಃ ಕೊಳೆತ ಸಸ್ಯಾವಶೇಷದಿಂದ ಇಂಗಾಲದ ಪ್ರಮಾಣ ಹೇರಳವಾಗಿರುವ ಜಲಾವೃತಗೊಂಡ ಪ್ರದೇಶ) ಮತ್ತು ಸ್ವಾಪ್ಸ್ (ಗಿಡಮರಗಳು ಜಲಾವೃತಗೊಂಡಿರುವ ಪ್ರದೇಶ) ಗಳನ್ನು ಒಳಗೊಂಡಿದೆ.

2) ಕರಾವಳಿ ಜೌಗು ಪ್ರದೇಶಗಳು ಅಂದರೆ ಎಸ್ಟುರೀಸ್ (ನದಿ ತೊರೆಗಳು ಸಮುದ್ರವನ್ನು ಸೇರುವ ಭಾಗ, ಭಾಗಶಃ ನದಿಗಳು ಸುತ್ತುವರಿದು ಕರಾವಳಿ ಪರಿಸರವನ್ನು ಸೃಷ್ಟಿಸುತ್ತವೆ), ಮ್ಯಾಂಗ್ರೂಲ್ಸ್ (ಕರಾವಳಿ ಪ್ರದೇಶಗಳಲ್ಲಿ ನೀರಿನಲ್ಲಿ ಬೆಳೆಯುವ ಮರಗಳು ಮತ್ತು ಪೊದೆಗಳು), ಲಗೂನ್ಸ್ (ಹಿರಿದಾದ ಮರಳಿನಿಂದ ಜಲಾವೃತಗೊಂಡಿರುವ ಪ್ರದೇಶದಿಂದ ಬೇರ್ಪಟ್ಟ ಕಿರಿದಾದ ಆಳವಿಲ್ಲದ ಜಲ ಪ್ರದೇಶ) ಹಾಗು ಹವಳದ ಬಂಡೆಗಳನ್ನು (Coral reefs) ಒಳಗೊಂಡಿವೆ.

3) ಮಾನವ ನಿರ್ಮಿತ ಕೃತಕ ಜೌಗು ಪ್ರದೇಶಗಳು ಅಂದರೆ ಮೀನುಗಾರಿಕೆಯ ಹೊಂಡಗಳು ಹಾಗು ಭತ್ತದ ಗದ್ದೆಗಳನ್ನು ಒಳಗೊಂಡಿವೆ.

ಭಾರತವು ಹಲವಾರು ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಜೌಗು ಭೂಮಿಗಳಿಗೆ ಆಶ್ರಯವಾಗಿದೆ. ಅವುಗಳಲ್ಲಿ ಹಲವು ರಾಮ್ಹಾರ್ ತಾಣಗಳೆಂದು (ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಚೌಗು ಭೂಮಿಗಳು) ಗೊತ್ತುಪಡಿಸಲಾಗಿದೆ. ಪ್ರಪಂಚದಲ್ಲಿ 2474 ರಾಮ್ಹಾರ್ ತಾಣಗಳಿದ್ದು, ಭಾರತದಲ್ಲಿ 75 ರಾಮ್ಹಾರ್ ತಾಣಗಳಿವೆ. ಕೆಲವು ಪ್ರಮುಖ ತಾಣಗಳು ಈ ಕೆಳಕಂಡತಿವೆ:

1) ಸುಂದರಬನ್ಸ್ ಜೌಗು ಪ್ರದೇಶ (ಪಶ್ಚಿಮ ಬಂಗಾಳ): ಸುಂದರಬನ್ಸ್ ಪ್ರಪಂಚದಲ್ಲೇ ಅತಿ ದೊಡ್ಡ ಮ್ಯಾಂಗೋವ್ ಅರಣ್ಯವಾಗಿದೆ ಎಂಬುವುದು ನಿಮಗೆ ಗೊತ್ತಾ? ಮತ್ತು ಭಾರತದಲ್ಲಿನ ಅತ್ಯಂತ ಪರಿಸರಿಯವಾಗಿ ಪ್ರಮುಖವಾದ ಆರ್ದಭೂಮಿಗಳಲ್ಲಿ ಒಂದಾಗಿದೆ. ಇದು ಪ್ರಸಿದ್ಧ ಬಂಗಾಳ ಹುಲಿಗಳಿಗೆ ನೆಲೆಯಾಗಿದೆ.

2) ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ (ಭರತ್‌ಪುರ, ರಾಜಸ್ಥಾನ): UNESCO ವಿಶ್ವ ಪರಂಪರೆಯ ತಾಣಗಳಲ್ಲಿ ಈ ಪ್ರದೇಶವೂ ಒಂದಾಗಿದ್ದು, ಇದು ಮಾನವ ನಿರ್ಮಿತ ಚೌಗು ಪ್ರದೇಶವಾಗಿದೆ. ಇದು ಸೈಬೀರಿಯನ್ ಕ್ರೇನ್ ಪಕ್ಷಿ ಸೇರಿದಂತೆ ಪ್ರತಿ ವರ್ಷ ಸಾವಿರಾರು ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತದೆ.

3) ಲೋಕ್ಟಾಕ್ ಸರೋವರ (ಮಣಿಪುರ): ಇದು ತೇಲುವ ಸಸ್ಯವರ್ಗಕ್ಕೆ ಹೆಸರುವಾಸಿಯಾಗಿದೆ. ಲೋಕ್ಷಕ್ ಸರೋವರವು ಈಶಾನ್ಯ ಭಾರತದ ಅತಿದೊಡ್ಡ ಸಿಹಿನೀರಿನ ಸರೋವರವಾಗಿದ್ದು, ವಲಸೆ ಹಕ್ಕಿಗಳು ಮತ್ತು ಜಲಚರಗಳ ಪ್ರಮುಖ ಆವಾಸ ಸ್ಥಾನವಾಗಿದೆ.

4) ವೆಂಬನಾಡ್ ಸರೋವರ (ಕೇರಳ): ಭಾರತದ ಅತಿ ಉದ್ದದ ಸರೋವರವಾದ ವೆಂಬನಾಡ್ ಕೇರಳದ ಪ್ರಮುಖ ಚೌಗು ಪ್ರದೇಶವಾಗಿದೆ, ಇದು ಶ್ರೀಮಂತ ಜೈವಿಕ ವೈವಿಧ್ಯತೆ ಮತ್ತು ಹಿನ್ನೀರಿನ ವಿಶಿಷ್ಟ ಪರಿಸರ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಸ್ಥಳೀಯ ಕೃಷಿಯಲ್ಲೂ ಇದು ಪ್ರಮುಖ ಪಾತ್ರವಹಿಸುತ್ತಿದೆ.

ಕರ್ನಾಟಕವು 6 ರಾಮ್‌ಸ‌ರ್ ತಾಣಗಳನ್ನು ಹೊಂದಿದ್ದು ಸರೋವರಗಳು, ಜಲಾಶಯಗಳು ಮತ್ತು ನದಿ ಪರಿಸರ ವ್ಯವಸ್ಥೆಗಳು ಸೇರಿದಂತೆ ವಿವಿಧ ರೀತಿಯ ಚೌಗು ಪ್ರದೇಶಗಳಿಗೆ ನೆಲೆಯಾಗಿದೆ. ರಾಜ್ಯದ 6 ರಾಮ್‌ಸರ್ ತಾಣಗಳು ಯಾವುವೆಂದರೆ:

1) ಮಂಡ್ಯದ ರಂಗನತಿಟ್ಟು ಪಕ್ಷಿಧಾಮ
2) ಮೈಸೂರಿನ ಕಬರ್ ಸರೋವರ (ಕಬಿನಿ ಜಲಾಶಯ)
3) ಚಿಕ್ಕಮಗಳೂರಿನ ಭದ್ರಾ ಜಲಾಶಯ
4) ಬೆಂಗಳೂರಿನ ಅಗರ ಸರೋವರ
5) ಹಂಪಿಯ ನಂದಾ ಸರೋವರ
6) ಕುದುರೆಮುಖ ರಾಷ್ಟ್ರೀಯ ಉದ್ಯಾನವನ

ಜೌಗು ಪ್ರದೇಶಗಳಿಗೂ ಮಾನವರಿಗಿರುವ ಸಂಬಂಧವೇನು?

ಜೌಗು ಪ್ರದೇಶಗಳು ಪರಿಸರ ಆರೋಗ್ಯ ಮತ್ತು ಜನರ ಜೀವನೋಪಾಯ ಎರಡನ್ನೂ ಬೆಂಬಲಿಸುವ ಹಲವಾರು ಪ್ರಯೋಜನಗಳನ್ನು ಒದಗಿಸುತ್ತವೆ. ಆರ್ದಭೂಮಿಗಳು ಲಕ್ಷಾಂತರ ಜನರಿಗೆ, ವಿಶೇಷವಾಗಿ ಗ್ರಾಮೀಣ ಮತ್ತು ಕರಾವಳಿ ಪ್ರದೇಶಗಳಲ್ಲಿ ಸಂಪನ್ಮೂಲಗಳನ್ನು ಒದಗಿಸುತ್ತಿವೆ. ಚೌಗು ಪ್ರದೇಶಗಳು ಅನೇಕ ಜಲಚರ ಜೀವಿಗಳಿಗೆ ನೆಲೆಯಾಗಿದೆ ಮತ್ತು ಈ ಪ್ರದೇಶಗಳಲ್ಲಿ ಮೀನುಗಾರಿಕೆಯೆ ಅನೇಕ ಜನಸಮುದಾಯಗಳಿಗೆ ಜೀವನಾಧಾರ ಮತ್ತು ವಾಣಿಜ್ಯ ಜೀವನೋಪಾಯವಾಗಿದೆ. ಇದಲ್ಲದೇ ಜೌಗು ಪ್ರದೇಶಗಳು ಫಲವತ್ತಾದ ಮಣ್ಣು ಮತ್ತು ನೀರಿನಿಂದ ಕೂಡಿರುವುದರಿಂದ ಭತ್ತದ ಕೃಷಿ ಮತ್ತು ಇತರ ಕೃಷಿ ಚಟುವಟಿಕೆಗಳಿಗೆ ಸೂಕ್ತವಾಗಿವೆ. ಉದಾಹರಣೆಗೆ, ಸುಂದರಬನ್ಸ್ ಮತ್ತು ಕೇರಳದ ಹಿನ್ನೀರು ಪ್ರದೇಶಗಳು ಸ್ಥಳೀಯ ಜನರ ಕೃಷಿಗೆ ಪ್ರಮುಖವಾಗಿವೆ.

ಅಂತರ್ಜಲ ಮರುಪೂರಣದಲ್ಲಿ ಜೌಗು ಪ್ರದೇಶಗಳ ಪಾತ್ರ ಬಹುಮುಖ್ಯ!

ಕುಡಿಯುವ ನೀರು, ಕೃಷಿ ನೀರಾವರಿ ಮತ್ತು ಕೈಗಾರಿಕಾ ಬಳಕೆಗಾಗಿ ನೀರಿನ ಸೆಲೆಯ ಲಭ್ಯತೆಯನ್ನು ಕಾಪಾಡಿಕೊಳ್ಳಲು ಈ ಪ್ರಕ್ರಿಯೆಯು ಅವಶ್ಯಕವಾಗಿದೆ. ಚೌಗು ಪ್ರದೇಶಗಳು ನೈಸರ್ಗಿಕ ಶೋಧಕಗಳು ಮತ್ತು ಸ್ಪಂಜುಗಳಾಗಿ ಕಾರ್ಯನಿರ್ವಹಿಸುವುದರಿಂದ ಮಳೆ, ಹಿಮ ಕರಗುವಿಕೆ ಮತ್ತು ಮೇಲ್ಫ್ ಹರಿವಿನಿಂದ ನೀರನ್ನು ಹೀರಿಕೊಳ್ಳುತ್ತವೆ. ನೀರು ಜೌಗು ಪ್ರದೇಶಕ್ಕೆ ಪ್ರವೇಶಿಸಿದಾಗ, ಅದು ಮಣ್ಣಿನ ಮೂಲಕ ಅಂತರ್ಜಲ ವ್ಯವಸ್ಥೆಗೆ ಚಲಿಸುತ್ತದೆ. ಮರಳು ಮತ್ತು ಜಲ್ಲಿಕಲ್ಲುಗಳಂತಹ ಚೌಗು ಭೂಮಿಯ ಮಣ್ಣುಗಳ ರಂಧ್ರದ ಸ್ವಭಾವವು ನೀರನ್ನು ಒಳನುಸುಳಲು ಮತ್ತು ಕೆಳಮುಖವಾಗಿ ಸೆಲೆಗಳಲ್ಲಿ ಹರಿಯಲು ಅನುವು ಮಾಡಿಕೊಡುತ್ತದೆ. ಈ ಒಳನುಸುಳುವಿಕೆ ಅಂತರ್ಜಲ ಮಟ್ಟವನ್ನು ಭರ್ತಿ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಬಾವಿ ಮತ್ತು ಇತರ ಅಂತರ್ಜಲ ಮೂಲಗಳಿಗೆ ನಿರಂತರ ನೀರಿನ ಪೂರೈಕೆಯನ್ನು ಖಾತ್ರಿಗೊಳಿಸುತ್ತದೆ.

ಹೆಚ್ಚಿನ ಮಳೆ ಅಥವಾ ಪ್ರವಾಹದ ಅವಧಿಯಲ್ಲಿ ಜೌಗು ಪ್ರದೇಶಗಳು ಹೆಚ್ಚುವರಿ ನೀರನ್ನು ಸಂಗ್ರಹಿಸುತ್ತವೆ ಮತ್ತು ನಿಧಾನವಾಗಿ ಅದನ್ನು ಬಿಡುಗಡೆ ಮಾಡುತ್ತವೆ. ಇದು ಕ್ರಮೇಣ ಮಣ್ಣಿನಲ್ಲಿ ಇಂಗಿ ನುಸುಳಲು ಅನುವು ಮಾಡಿಕೊಡುತ್ತದೆ. ಈ ನಿಧಾನಗತಿಯ ನೀರಿನ ಬಿಡುಗಡೆಯು ಮೇಲೆ ಹರಿವು ಮತ್ತು ಸವೆತವನ್ನು ನೀರು ಕ್ರಮೇಣವಾಗಿ ಅಂತರ್ಜಲ ಮರುಪೂರಣಕ್ಕೆ ಸಹಾಯ ಮಾಡುತ್ತದೆ.

ನೈಸರ್ಗಿಕ ಜೀವವೈವಿಧ್ಯವನ್ನು ಬೆಂಬಲಿಸಲು, ಅಪರೂಪದ ಹಾಗು ವಲಸೆ ಹಕ್ಕಿಗಳು, ಜಲವಾಸಿ ಕೀಟಗಳು ಮತ್ತು ಇತರ ಪ್ರಾಣಿಗಳು ಸೇರಿದಂತೆ ವಿವಿಧ ಪ್ರಭೇದಗಳಿಗೆ ಆವಾಸಸ್ಥಾನಗಳನ್ನು ಒದಗಿಸಲು ಜೌಗು ಭೂಮಿಗಳು ಮುಖ್ಯವಾಗಿವೆ. ಜೌಗು ಪ್ರದೇಶಗಳು ಮೀನು, ಕೀಟಗಳು ಮತ್ತು ಸಸ್ಯಗಳಂತಹ ಆಹಾರ ಮೂಲಗಳಲ್ಲಿ ಸಮೃದ್ಧವಾಗಿರುವುದರಿಂದ ವಲಸೆ ಹಕ್ಕಿಗಳಿಗೆ ದೀರ್ಘ ಪ್ರಯಾಣದ ಸಮಯದಲ್ಲಿ ಅಗತ್ಯವಾದ ನಿಲುಗಡೆಗೆ ಸಹಾಯವಾಗುತ್ತದೆ. ಜಲಪಕ್ಷಿಗಳು ಸೇರಿದಂತೆ ಅನೇಕ ಪಕ್ಷಿ ಪ್ರಭೇದಗಳು ಹೇರಳವಾದ ಆಹಾರ ಪೂರೈಕೆಯಾಗುವುದರಿಂದ ಜೌಗು ಪ್ರದೇಶಗಳನ್ನು ಗೂಡುಕಟ್ಟುವ ತಾಣಗಳಾಗಿ ಬಳಸುತ್ತವೆ. ಜೌಗು ಪ್ರದೇಶಗಳು ಪಕ್ಷಿಗಳು ವಿಶ್ರಾಂತಿ ಪಡೆಯಲು, ಪರಭಕ್ಷಕಗಳಿಂದ ಮರೆಯಾಗಲು ಮತ್ತು ತಮ್ಮ ಮರಿಗಳನ್ನು ಬೆಳೆಸಲು ಸುರಕ್ಷಿತ ಪ್ರದೇಶಗಳಾಗಿ ಕಾರ್ಯನಿರ್ವಹಿಸುತ್ತವೆ. ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದಗಳು ತಮ್ಮ ಉಳಿವಿಗಾಗಿ ಸಾಮಾನ್ಯವಾಗಿ ಈ ಪರಿಸರದಲ್ಲಿ ಆಶ್ರಯ ಪಡೆಯುತ್ತವೆ.

ಇಷ್ಟೊಂದು ಓದಿದ ಮೇಲೆ ನಮ್ಮ ಭೂಮಿಯ ಆರೋಗ್ಯಕ್ಕೆ ಜೌಗು ಪ್ರದೇಶಗಳು ಎಷ್ಟು ಅನಿವಾರ್ಯವೆಂಬುವುದು ನಿಮಗೆ ಅರಿವಾಗಿರಬಹುದು. ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಪರಿಸರ ಮಾಲಿನ್ಯವನ್ನು ಎದುರಿಸುವಲ್ಲಿ ತೇವಭೂಮಿಗಳನ್ನು ಸಂರಕ್ಷಿಸುವ ಪ್ರಯತ್ನಗಳು ನಿರ್ಣಾಯಕವಾಗಿವೆ. ನಾವು ಜೌಗು ಭೂಮಿಗಳ ಅಪಾರ ಮೌಲ್ಯವನ್ನು ಎಲ್ಲ ಜನರಲ್ಲಿ ಅರಿವು ಮೂಡಿಸಿ, ಅವುಗಳ ಸಂರಕ್ಷಣೆ ಮತ್ತು ಪುನಃಸ್ಥಾಪನೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವುದರ ಜೊತೆ ಕಾರ್ಯಪ್ರವತ್ತರಾಗಬೇಕು. ಹವಾಮಾನ ಬದಲಾವಣೆಯನ್ನು ತಗ್ಗಿಸಲು ಮತ್ತು ಸುಸ್ಥಿರ ಮಾನವ ಅಭಿವೃದ್ಧಿಯನ್ನು ಬೆಂಬಲಿಸಲು ಚೌಗು ಭೂಮಿಗಳನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜೌಗು ಪ್ರದೇಶಗಳ ಸಂರಕ್ಷಣೆ ನಮ್ಮ ನೈಸರ್ಗಿಕ ಪರಂಪರೆ ಮಾತ್ರವಲ್ಲ, ನಮ್ಮ ಜವಾಬ್ದಾರಿಯೂ ಹೌದು.

Leave a Reply

Your email address will not be published. Required fields are marked *