Home » ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?

ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?

ರೈತರು ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಆದ್ದರಿಂದಲೇ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಂತ ಟ್ರ್ಯಾಕ್ಟರ್ ಇರಬೇಕು ಎಂಬುದು ಪ್ರತಿಯೊಬ್ಬ ರೈತನ ಕನಸಾಗಿದೆ. ಆದರೆ, ಆ ಕನಸನ್ನು ನನಸಾಗಿಸುವುದಕ್ಕೆ ಹಣ ಹೇಗೆ ಹೊಂದಿಸಬೇಕು ಎಂಬುದು ಹಲವರಿಗೆ ಚಿಂತೆಯಾಗಿದೆ. ಆದರೆ, ಇನ್ನು ಮೇಲೆ ಆ ಚಿಂತೆ ಬೇಡ. ನಿಮ್ಮ ಟ್ರ್ಯಾಕ್ಟರ್ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರವೇ ಸಹಾಯ ಮಾಡುತ್ತದೆ. ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಬರೋಬರಿ ಶೇಕಡ 50ರಷ್ಟು ಸಬ್ಸಿಡಿ (ಸಹಾಯಧನ) ನೀಡುತ್ತಿದೆ. ಅಂದರೆ ₹10 ಲಕ್ಷದ ಟ್ರ್ಯಾಕ್ಟರ್ ನಿಮಗೆ ಕೇವಲ ₹5 ಲಕ್ಷಕ್ಕೆ ಸಿಗುತ್ತದೆ.
ಹೌದು, ಈ ಯೋಜನೆಯ ಹೆಸರೇ ಕಿಸಾನ್ ಟ್ರ್ಯಾಕ್ಟರ್ ಯೋಜನೆ. ರೈತರ ಕೆಲಸವನ್ನು ಸುಲಭ ಮಾಡುವುದಕ್ಕೆ ಮತ್ತು ರೈತರ ಮೇಲಿನ ಸಾಲದ ಹೊರೆಯನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರ್ಕಾರವು ‘ಕಿಸಾನ್ ಟ್ರಾಕ್ಟರ್ ಯೋಜನೆ’ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಟ್ರಾಕ್ಟರ್ ಖರೀದಿಸಲು ಹಣಕಾಸಿನ ನೆರವು ಒದಗಿಸುತ್ತಿದೆ. ಎಲ್ಲ ವರ್ಗದ ರೈತರು ಈ ಯೋಜನೆಯ ಲಾಭ ಪಡೆಯಬಹುದು.

ಏನಿದು ಕಿಸಾನ್‌ ಟ್ರ್ಯಾಕ್ಟರ್ ಯೋಜನೆ.!

ಕಿಸಾನ್ ಟ್ರ್ಯಾಕ್ಟರ್ ಯೋಜನೆಯು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಒಂದು ಪ್ರಮುಖ ಯೋಜನೆಯಾಗಿದ್ದು, ರೈತರಿಗೆ ಆಧುನಿಕ ಕೃಷಿ ಉಪಕರಣಗಳನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಿದೆ. ಕೃಷಿ ಯಾಂತ್ರೀಕರಣದ ಉಪ-ಮಿಷನ್ (ಎಸ್‌ಎಂಎಎಂ) ಅಡಿಯಲ್ಲಿ ‘ಕಿಸಾನ್ ಟ್ರ್ಯಾಕ್ಟರ್ ಯೋಜನೆ’ಯನ್ನು ಜಾರಿ ಮಾಡಲಾಗಿದ್ದು, ಇದೊಂದು ಉಪ ಯೋಜನೆಯಾಗಿದೆ.
ಈ ಯೋಜನೆಯಡಿ ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರವು ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ, ಅರ್ಹ ರೈತರು ಹೊಸ ಟ್ರ್ಯಾಕ್ಟರ್‌ ಅನ್ನು ಆನ್‌ರೋಡ್ ಬೆಲೆಯ ಮೇಲೆ ಶೇಕಡ 50ರಷ್ಟು ಸಬ್ಸಿಡಿ ಪಡೆಯಬಹುದು. ಈ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ, ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಯಾಂತ್ರಿಕೃತ ಉಪಕರಣಗಳ ಬಳಕೆಯನ್ನು ಉತ್ತೇಜಿಸುತ್ತದೆ.

ಯೋಜನೆಯಿಂದ ಆಗುವ ಲಾಭವೇನು?

  • ಶೇಕಡ 50ರಷ್ಟು ಸಬ್ಸಿಡಿ: ರೈತರು ಟ್ರ್ಯಾಕ್ಟರ್‌ ಅನ್ನು ಆನ್‌ರೋಡ್ ಬೆಲೆಯ ಮೇಲೆ ಶೇಕಡ 50ರಷ್ಟು ಸಬ್ಸಿಡಿ (ಸಹಾಯಧನ) ಪಡೆಯಬಹುದು.
  • ಮಧ್ಯವರ್ತಿಗಳ ಕಾಟವಿಲ್ಲ: ಸರ್ಕಾರದ ಅಥವಾ ಯಾವುದೇ ಯೋಜನೆ ಆಗಲಿ ಮಧ್ಯವರ್ತಿಗಳ ಕಾಟ ತುಂಬಾನೇ ಇರುತ್ತದೆ. ಫಲಾನುಭವಿಗಳಿಗೆ ಸಿಗಬೇಕಾದ ಪ್ರಯೋಜನದಲ್ಲಿ ಬಹುಪಾಲು ಮಧ್ಯವರ್ತಿಗಳ ಕೈ ಸೇರುತ್ತದೆ. ಆದರೆ, ಕಿಸಾನ್ ಟ್ರಾಕ್ಟರ್ ಯೋಜನೆಯಲ್ಲಿ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ಸಬ್ಸಿಡಿಯನ್ನು ನೇರವಾಗಿ ಬಿಡುಗಡೆ ಆದೇಶ ಮೂಲಕವೇ ನೀಡಲಾಗುತ್ತದೆ.
  • ಹೆಚ್ಚು ಪಾರದರ್ಶಕತೆ: ಸಬ್ಸಿಡಿಯನ್ನು ಬಿಡುಗಡೆ ಆದೇಶ ಮೂಲಕ ನೇರವಾಗಿ ನೀಡುವುದರಿಂದ ಈ ಯೋಜನೆಯು ತ್ವರಿತ ಮತ್ತು ಪಾರದರ್ಶಕ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.
  • ಸಾಲ ಸೌಲಭ್ಯ: ಉಳಿದ ವೆಚ್ಚಕ್ಕಾಗಿ ಬ್ಯಾಂಕ್ ಸಾಲ ಸೌಲಭ್ಯವನ್ನು ಪಡೆಯಲು ಸಹ ಈ ಯೋಜನೆ ಅನುಕೂಲ ಮಾಡಿಕೊಡುತ್ತದೆ.
  • ಉತ್ಪಾದಕತೆ ಹೆಚ್ಚಳ: ಆಧುನಿಕ ಯಂತ್ರೋಪಕರಣಗಳಿಂದ ಉಳುಮೆ, ಬಿತ್ತನೆ ಮತ್ತು ಕಟಾವು ಮುಂತಾದ ಕಾರ್ಯಗಳು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುವುದರಿಂದ ಬೆಳೆಯ ಇಳುವರಿ ಸುಧಾರಿಸುತ್ತದೆ.
  • ಜಾತಿ ನಿರ್ಬಂಧ ಇಲ್ಲ: ಈ ಯೋಜನೆಯು ಸಾಮಾನ್ಯ, ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ವರ್ಗದ ಎಲ್ಲ ರೈತರಿಗೂ ಮುಕ್ತವಾಗಿದೆ.
  • ಯಾರಿಗೆ ಆದ್ಯತೆ: ಉಪಕರಣಗಳ ಹೆಚ್ಚಿನ ವೆಚ್ಚದಿಂದ ತೊಂದರೆಪಡುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಹಾಗೆಯೇ ಮಹಿಳಾ ರೈತರಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಹತೆಗಳು

  • ಅರ್ಜಿ ಸಲ್ಲಿಸುವವರು ಭಾರತದ ಪ್ರಜೆಯಾಗಿರಬೇಕು.
  • ರೈತರ ವಾರ್ಷಿಕ ಆದಾಯವು ₹2 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಅರ್ಜಿದಾರರು ಈ ಹಿಂದೆ ಟ್ರ್ಯಾಕ್ಟರ್ ಸಬ್ಸಿಡಿಯನ್ನು ಪಡೆದಿರಬಾರದು.
  • ಒಂದು ಕುಟುಂಬಕ್ಕೆ ಈ ಯೋಜನೆಯಡಿಯಲ್ಲಿ ಒಂದು ಟ್ರ್ಯಾಕ್ಟರ್ ಸಬ್ಸಿಡಿ ಮಾತ್ರ ಸಿಗುತ್ತದೆ.
  • ಅರ್ಜಿದಾರರು ಅಧಿಕೃತ ಭೂ ದಾಖಲೆಗಳು ಅಥವಾ ಕೃಷಿ ಮಾಲೀಕತ್ವದ ಪುರಾವೆಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಆಧಾರ್ ಕಾರ್ಡ್
  • ಭೂ ಮಾಲೀಕತ್ವದ ಪುರಾವೆ (ಪಹಣಿ ಅಥವಾ ಆರ್‌ಟಿಸಿ)
  • ಬ್ಯಾಂಕ್ ಪಾಸ್‌ಬುಕ್
  • ನಿವಾಸ ಪ್ರಮಾಣ ಪತ್ರ
  • ತೆಗೆದುಕೊಳ್ಳಲು ಇಚ್ಚಿಸುವ ಟ್ರಾಕ್ಟರ್‌ನ ದರಪಟ್ಟಿ (ಕೊಟೇಶನ್)
  • ಪಾಸ್‌ಪೋರ್ಟ್ ಸೈಜ್ ಫೋಟೊ

ಅರ್ಜಿ ಸಲ್ಲಿಸುವುದು ಹೇಗೆ?

  • ಕೇಂದ್ರ ಸರ್ಕಾರದ ಕಿಸಾನ್‌ ಟ್ರ್ಯಾಕ್ಟರ್ ಯೋಜನೆಗೆ ನೀವು ಅನ್‌ಲೈನ್ ಮತ್ತು ಆಪ್‌ಲೈನ್‌ ವಿಧಾನದ ಮೂಲಕ ಅರ್ಜಿ ಸಲ್ಲಿಸಬಹುದು.
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹಂತಗಳು ಈ ಕೆಳಗಿನಂತಿವೆ
  • ಆನ್‌ಲೈನ್ ನೋಂದಣಿ: ಮೊದಲಿಗೆ, ಕೃಷಿ ಯಾಂತ್ರೀಕರಣ ಮತ್ತು ತಂತ್ರಜ್ಞಾನಕ್ಕಾಗಿ ಡಿಜಿಟಲ್ ವೇದಿಕೆ https://agrimachinery.nic.in/ ಪೋರ್ಟಲ್‌ಗೆ ಭೇಟಿ ನೀಡಿ. (ರಾಜ್ಯದ ಕೃಷಿ ಇಲಾಖೆಯ ಪೋರ್ಟಲ್ https://kkisan.karnataka.gov.in ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ). ಅಲ್ಲಿ ಹೊಸ ರೈತರ ನೋಂದಣಿ ಆಯ್ಕೆಯನ್ನು ಆರಿಸಿ.
  • ಇ-ಕೆವೈಸಿ ಪರಿಶೀಲನೆ: ನಿಮ್ಮ ಗುರುತನ್ನು ಪರಿಶೀಲಿಸಲು ಆಧಾರ್ ಸಂಖ್ಯೆಯನ್ನು ಬಳಸಿ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ಲಾಗಿನ್ ಸ್ವೀಕೃತಿ: ಯಶಸ್ವಿ ಪರಿಶೀಲನೆಯ ನಂತರ ನಿಮಗೆ ಒಂದು ಅಪ್ಲಿಕೇಶನ್ ಐಡಿ ಮತ್ತು ಪಾಸ್‌ವರ್ಡ್ ದೊರೆಯುತ್ತದೆ. (ಇದನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ).
  • ವಿವರಗಳ ಭರ್ತಿ: ಅಪ್ಲಿಕೇಶನ್ ಐಡಿ ಬಳಸಿ ಪೋರ್ಟಲ್‌ಗೆ ಲಾಗಿನ್ ಮಾಡಿ. ನಿಮ್ಮ ಮೂಲ ವಿವರಗಳಾದ ಬ್ಯಾಂಕ್ ಖಾತೆ ಮಾಹಿತಿ, ಭೂ ದಾಖಲೆಗಳು ಮತ್ತು ಇತರ ಅಗತ್ಯ ಮಾಹಿತಿಗಳನ್ನು ನಮೂದಿಸಿ. ಕೇಳಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  • ಯೋಜನೆಗೆ ಅರ್ಜಿ ಸಲ್ಲಿಸಿ: ಪೋರ್ಟಲ್‌ನಲ್ಲಿ ಟ್ರ್ಯಾಕ್ಟರ್ ಸಹಾಯಧನ ಯೋಜನೆಗೆ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಆರಿಸಿ. ಅರ್ಜಿಯನ್ನು ಸಲ್ಲಿಸಿದ ನಂತರ, ನೀವು ಟ್ರ್ಯಾಕಿಂಗ್ ಉದ್ದೇಶಗಳಿಗಾಗಿ ಅಪ್ಲಿಕೇಶನ್ ಐಡಿ ಒಂದನ್ನು ಪಡೆಯುತ್ತೀರಿ. ಇದನ್ನು ಇಟ್ಟುಕೊಂಡು ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.

ಆಫ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ

  • ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ರೈತರು ಸ್ಥಳೀಯ ಸೇವಾ ಕೇಂದ್ರಕ್ಕೆ (ಸಿಎಸ್‌ಸಿ) ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
  • ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಬೇಕು.
  • ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮತ್ತು ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗೆ ಸಲ್ಲಿಸಬೇಕು.
  • ದಾಖಲೆಗಳ ಪರಿಶೀಲನೆ ಸೇರಿದಂತೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಬ್ಸಿಡಿ ಅನುಮೋದನೆಯನ್ನು ನೀಡಲಾಗುತ್ತದೆ.

Leave a Reply

Your email address will not be published. Required fields are marked *